ಭಗವತೀ ಆರಾಧನೆ

	ಗೌರಿ, ಅಂಬಾ, ಪಾರ್ವತಿ, ಮಹಾಲಕ್ಷಿ ಮುಂತಾದ ಹೆಸರಿನಲ್ಲಿ ಕರೆಸಿಕೊಳ್ಳುವ ದೇವಿಯ ಪೂಜೆ. ಪ್ರಾಂತಪ್ರಾಂತಗಳಲ್ಲಿ ಇದು ಬೇರೆ ಬೇರೆಯಾಗಿರುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಭಗವತೀ ಒಂದು ಗ್ರ್ರಾಮದೇವತೆ. ಈ ದೇವತೆ ಭಗ ಎಂದರೆ ಐಶ್ವರ್ಯ ಕೊಡುವ ದೇವತೆ. ಭಗವತಿಯ ಪೂಜಾರಿಗಳು ಸಾಮಾನ್ಯವಾಗಿ ಗೊರವರಾಗಿರುತ್ತಾರೆ. ಕೊಂಕಣ ಪ್ರಾಂತದಲ್ಲಿ ಧಾಮಾಪುರ, ಮಾಶೇಳ್, ಖಾಂಡೋಳೆ, ಮಾಂದ್ರೇ, ತುಯೇ, ಪೇಡಣೇ ಮತ್ತು ಪಂಚವಾಡಿಗಳಲ್ಲಿ ಭಗವತೀ ಮಂದಿರಗಳಿವೆ. ಇವುಗಳಲ್ಲಿ ಖಾಂಡೋಳೆ ಹಾಗೂ ಮಾಶೇಳಗಳಲ್ಲಿರುವ ದೇವತೆ ಮಹಿಷಾಸುರ ಮರ್ದಿನಿ ಆಗಿದ್ದು ಮೂರ್ತಿಯನ್ನು ಕಪ್ಪುಶಿಲೆಯಲ್ಲಿ ಕೆತ್ತಲಾಗಿದೆ. ಕೇರಳದಲ್ಲಿಯೂ ಭಗವತೀ ಕನ್ಯಾಕುಮಾರೀ, ಗೌರೀ, ಅಂಬಾ, ಪಾರ್ವತಿ ಮುಂತಾಗಿ ಬೇರೆ ಬೇರೆ ಹೆಸರುಗಳಿಂದ ಪೂಜೆಗೊಳ್ಳುತ್ತಾಳೆ. ಅಲ್ಲಿ, ಅದರಲ್ಲಿಯೂ ಆಷಾಡ ಮಾಸದಲ್ಲಿ (ಕರ್ಕ) ಉತ್ತರಾಯಣ ಮುಗಿದು ದಕ್ಷಿಣಾಯನ ಆರಂಭವಾಗುವ ಕಾಲದಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಕೇರಳದಲ್ಲಿ ಹೊಸ ಫಸಲು ಬಂದು ಜನತೆ ತಮ್ಮ ತಮ್ಮ ಮನೆಗಳಲ್ಲಿ ಕಣಜ ಇತ್ಯಾದಿಗಳನ್ನು ಸ್ವಚ್ಛಮಾಡಿ ತಿಂಗಳ ಕೊನೆಯ ದಿವಸ ಆಳೊಬ್ಬನ ಕೈಯಲ್ಲಿ ಒಡೆದ ಹಳೆಯ ಮಡಕೆಯಲ್ಲಿ ಗೇರನ್ನು ತುಂಬಿ ದೀವಟಗಿ ಕೊಟ್ಟು ಮನೆಯ ಸುತ್ತಮುತ್ತ ಎಲ್ಲಕಡೆ ಸುತ್ತು ಹರಿವಂತೆ ಮಾಡಿ ಕೊನೆಗೆ ದೂರ ಹೋಗಿ ಆ ಗೇರಿನ ಮಡಕೆಯನ್ನು ಎಸೆಯಲು ಹೇಳುತ್ತಾರೆ. ಆ ದಿನ ಆ ಆಳು ಮನೆಗೆ ಮರಳಿ ಬರಬಾರದು. ಹೀಗೆ ಮಾಡುವುದರಿಂದ ಜ್ಯೇಷ್ಠಾದೇವಿ (ಅಪದೆಸೆ) ಗೇರಿನ ಜೊತೆಗೆ ಹೊರ ಹೋಗುತ್ತಾಳೆಂದು ನಂಬಿಕೆ. ಅನಂತರ ಮನೆಯಲ್ಲವನ್ನೂ ಗಂಗಾಜಲದಿಂದ ಶುದ್ಧೀಕರಿಸಿ ದೇವರ ಮುಂದೆ ದೀಪ ಹಚ್ಚುತ್ತಾರೆ. ದೇವಿಯನ್ನು ಆಹ್ವಾನಿಸಲು ದೇವರ ಮನೆಯಲ್ಲಿ ಅರಿಷಿಣ, ಕುಂಕುಮ, ಕಾಡಿಗೆ, ಅಕ್ಷತೆ, ಸೀರೆ, ಕುಪ್ಪಸ, ಅನ್ನ, ಅಸನ, ಗ್ರ್ರಂಥ, ಹತ್ತು ಬಗೆಯ ಪತ್ರೆ, ಜಲಪಾತ್ರೆ ಇತ್ಯಾದಿಗಳನ್ನು ಸಿದ್ಧಮಾಡಿ ಇಡುತ್ತಾರೆ. ಎರಡನೆಯ ದಿವಸ ಮನೆಯಲ್ಲಿ ದೇವಿಯ ಪೂಜೆಯನ್ನು ಎಲ್ಲರೂ ಮಾಡುತ್ತಾರೆ. ಈ ಪೂಜೆ 7-30 ದಿನಗಳ ಪರ್ಯಂತ ಅವರವರ ಮನೆಯ ಸಂಪ್ರದಾಯದಂತೆ ಮಾಡುತ್ತಾರೆ. ಸ್ತ್ರೀಯರು ರಾಮಾಯಣ ಇಲ್ಲವೇ ದೇವಿಮಹಾತ್ಮ್ಯೆ ಪಾರಾಯಣ ಮಾಡುತ್ತಾರೆ. ಸಪ್ತ ಮಾತೃಕೆಯರನ್ನೇ ದೇವಿಯರೆಂದು ಭಾವಿಸಲಾಗುತ್ತದೆ.

	ಉತ್ತರಭಾರತದಲ್ಲೂ ಈ ದೇವಿಯ ವಿಶಿಷ್ಟ ಪೂಜೆ ಉಂಟು.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ